ಏರೈಡೆಸ್: ಆರ್ಕಿಡೇಸಿ ಸಸ್ಯ ಕುಟುಂಬದಲ್ಲಿ (ಫ್ಯಾಮಿಲಿ) ಅತಿ ಮುಖ್ಯವಾದ ಜಾತಿ. ಇದರಲ್ಲಿ ಅರುವತ್ತಕ್ಕೂ ಹೆಚ್ಚು ಪ್ರಭೇದಗಳು (ಸ್ಪೀಶೀಸ್) ಇವೆ. ಇವು ಆರ್ಕಿಡ್ ಸಸ್ಯಗಳು; ಬಲು ಸರಳ ಮತ್ತು ಸುಂದರವಾಗಿರುವುದರಿಂದ ಜನಪ್ರಿಯವಾಗಿವೆ. ಫ್ಲೋರಾಕೊಚಿನ್ ಚೈನೆನ್ಸಿಸ್ ಎಂಬ ಗ್ರಂಥದಲ್ಲಿ (1790) ಏರೈಡೆಸ್ ಓಡರೇಟಂ ಎಂಬ ಜಾತಿಯ ಆರ್ಕಿಡ್ಡಿನ ಉಲ್ಲೇಖವಿದೆ. ಏರೈಡೆಸ್ ಆರ್ಕಿಡ್ಡುಗಳು ಏಷ್ಯಖಂಡದ ಮೂಲವಾಸಿಗಳು.ಏರೈಡೆಸ್ ಜಾತಿಯವು ಸಾಮಾನ್ಯವಾಗಿ ಅಪ್ಪು ಸಸ್ಯಗಳಾಗಿಯೂ ಶಿಲಾಸಸ್ಯಗಳಾ ಗಿಯೂ ಬೆಳೆಯುತ್ತವೆ. ಇವು ವಾಂಡಾ ಜಾತಿಯ ಆರ್ಕಿಡ್ಡುಗಳನ್ನು ಅನೇಕ ವಿವರಗಳಲ್ಲಿ ಹೋಲುತ್ತವೆ. ಇವುಗಳಲ್ಲಿ ಹಳೆಯ ಎಲೆಗಳ ಸ್ವಲ್ಪಭಾಗ ಉಳಿದಿರುವುದು ಗಮನಾರ್ಹ ವ್ಯತ್ಯಾಸ. ಈ ಜಾತಿಯ ಸಸ್ಯಗಳ ಹೂ ಗೊಂಚಲುಗಳು ನರಿಯ ಬಾಲದಂತಿರುವುದರಿಂದ ನರಿಬಾಲದ ಆರ್ಕಿಡ್ಡುಗಳೆಂದು ಇವುಗಳಿಗೆ ಹೆಸರು. ಹೂ ಗೊಂಚಲು ಅಂತ್ಯಾರಂಬಿ (ರೇಸಿಮೋಸ್); ಕೊಳವೆಯಾಕಾರ. ಪರಿಮಳವನ್ನು ಬೀರುವ ಆರ್ಕಿಡ್ಡುಗಳಲ್ಲಿ ಇವು ಅಗ್ರಸ್ಥಾನ ಪಡೆದಿವೆ. ಹೂಗಳ ಬಣ್ಣ ವಿವಿಧ, ಪುಷ್ಪಪತ್ರ ಮತ್ತು ದಳ ಅಗಲ. ಪಕ್ಕದ ಹೂವಿನ ಪುಷ್ಪಪತ್ರಗಳು ಮೇಲಿನ ಹೂವಿನ ಪುಷ್ಪಪತ್ರಗಳಿಗಿಂತ ಅಗಲವಾಗಿರುತ್ತವೆ. ಪುಷ್ಪಮಂಜರಿಯ ಕಂಬದ ಬುಡದ ಭಾಗ ದಪ್ಪವಾಗಿ ಹಕ್ಕಿ ತಲೆಯ ಆಕಾರವನ್ನು ಹೋಲುತ್ತವೆ. ಹೂವಿನ ಭಾಗಗಳು ವಿವಿಧ ಬಣ್ಣಗಳಲ್ಲಿರುವುದರಿಂದ ಬಹಳ ಸುಂದರವಾಗಿ ಕಾಣುತ್ತವೆ.  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ